ಬಸ್ಸಾರು
ಬೇಕಾಗುವ ಸಾಮಗ್ರಿಗಳು:
ತೊಗರಿಬೇಳೆ 2ಕಪ್
ಕೀರೆ ಸೊಪ್ಪು 2ಕಟ್ಟು
ಸಬ್ಸಿಗೆ ಸೊಪ್ಪು 2ಕಟ್ಟು
ಈರುಳ್ಳಿ 1
ಬೆಳ್ಳುಳ್ಳಿ 2ಗಡ್ಡೆ
ಹುಣಸೆಹಣ್ಣು ಸಣ್ಣ ನಿಂಬೆ ಗಾತ್ರ
ಜೀರಿಗೆ 1ಚಮಚ
ಕಾಳು ಮೆಣಸು 1/2 ಚಮಚ
ಕರಿಬೇವು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ತೆಂಗಿನ ತುರಿ 3ಚಮಚ
ಸಾರಿನ ಪುಡಿ 2ಚಮಚ
ಒಣಮೆಣಸಿನ ಕಾಯಿ 5
ಎಣ್ಣೆ 1ಚಮಚ
ಸಾಸಿವೆ 1/2ಚಮಚ
ಮಾಡುವ ವಿಧಾನ:
ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಡಿ. ಸೊಪ್ಪುನ್ನು ಸ್ವಚ್ಛ ಮಾಡಿ ತೊಳೆದು ಇಡಿ. ಮೊದಲು ತೊಗರಿಬೇಳೆ ಬೇಯಲು ಇಡಿ. ಅರ್ಧ ಬೆಂದ ಬೇಳೆಗೆ ಸೊಪ್ಪು ಮತ್ತು ಉಪ್ಪು ಸೇರಿಸಿ ಬೇಯಿಸಿ. ಸೊಪ್ಪು ಮತ್ತು ಬೇಳೆಯನ್ನು ಬಸಿದು ಇಟ್ಟುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಅರ್ಧ ಈರುಳ್ಳಿ, ಬೆಳ್ಳುಳ್ಳಿ 10 ಎಸಳು, ಜೀರಿಗೆ, ಮೆಣಸು, ಕರಿಬೇವು ಹಾಕಿ ಹುರಿದು ತೆಗೆದಿಡಿ.
ತಣ್ಣಾಗಾದ ನಂತರ ಇದಕ್ಕೆ ಹಸಿ ಈರುಳ್ಳಿ ಅರ್ಧ, ಬೆಳ್ಳುಳ್ಳಿ 10 ಎಸಳು, ತೆಂಗಿನ ತುರಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ನೆನೆಸಿದ ಹುಣಸೆಹಣ್ಣು, ಸಾರಿನ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬೇಳೆ ಕಟ್ಟಿಗೆ ರುಬ್ಬಿದ ಮಿಶ್ರಣ ಮತ್ತು ಉಪ್ಪು ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ ನಂತರ ಒಗ್ಗರಣೆ ಮಾಡಿದರೆ ರುಚಿಯಾದ ಬಸ್ಸಾರು ರೆಡಿ.
ಒಗ್ಗರಣೆ:
ಒಗ್ಗರಣೆ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಕರಿಬೇವು, ಒಣಮೆಣಸಿನ ಕಾಯಿ, ಜಜ್ಜಿದ ಬೆಳ್ಳುಳ್ಳಿ ಹಾಕಿ. ಇದನ್ನು ಸಾರಿಗೆ ಸೇರಿಸಿ.
ಸೊಪ್ಪಿನ ಪಲ್ಯ
ಬೇಕಾಗುವ ಸಾಮಗ್ರಿಗಳು:
ಎಣ್ಣೆ 1ಚಮಚ
ಸಾಸಿವೆ 1/4ಚಮಚ
ಒಣಮೆಣಸಿನ ಕಾಯಿ 3
ಬೆಳ್ಳುಳ್ಳಿ 10 ಎಸಳು
ತೆಂಗಿನ ತುರಿ ಸ್ವಲ್ಪ
ಅರಿಶಿನ ಸ್ವಲ್ಪ
ಮಾಡುವ ವಿಧಾನ:
ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಕಿ ಸಿಡಿಸಿ ನಂತರ ಜಜ್ಜಿದ ಬೆಳ್ಳುಳ್ಳಿ, ಒಣಮೆಣಸಿನ ಕಾಯಿ, ಅರಿಶಿನ ಹಾಕಿ ಹುರಿದು ಇದಕ್ಕೆ ಬೇಯಿಸಿ ಇಟ್ಟುಕೊಂಡ ಬೇಳೆ ಮತ್ತು ಸೊಪ್ಪುನ್ನು ಸೇರಿಸಿ ಕೈಯಾಡಿಸಿ. ಕೊನೆಯದಾಗಿ ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ.
ಕೀರೆ ಸೊಪ್ಪು, ದಂಟಿನ ಸೊಪ್ಪು, ಸಬ್ಸಿಗೆ ಸೊಪ್ಪು, ಹೊನಗೊನೆ ಸೊಪ್ಪು ಇವರಲ್ಲಿ ಯಾವುದಾದರೂ ಒಂದು ಸೊಪ್ಪುನ್ನು ಉಪಯೋಗಿಸಬಹುದು ಅಥವಾ ಮಿಶ್ರ ಮಾಡಿನೂ ಉಪಯೋಗಿಸಬಹುದು.ನುಗ್ಗೆ ಸೊಪ್ಪು ಹಾಕಿನೂ ಮಾಡಬಹುದು.